Wednesday, September 15, 2010

ಮಾರೋದು ಹೀಗಾ?

ಮಾರೋದು ಹೀಗಾ?

ಇತ್ತೀಚೆಗೆ ನಮಗೆ ಹಲವು ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತಿವೆ. ಪ್ರಶ್ನೆಗಳೇ ಇಲ್ಲದಿದ್ದರೂ ನಿಮ್ಮ ಮನದೊಳಗೆ ಬಂದು `ವಿಶೇಷ', `ವಿಭಿನ್ನ' ಪ್ರಶ್ನೆಯ ಹುಳು ಬಿಟ್ಟು, ಅದಕ್ಕೆ ಉತ್ತರ ಕೊಟ್ಟು ಅವರೇ ಕೃತಾರ್ಥರಾಗುತ್ತಾರೆ.

ನಡೆಯುವುದು ಹೀಗೆ, ಮಾತನಾಡುವುದು ಹೀಗೆ, ಓಢಾಡುವುದು ಹೀಗೆ, ನಗುವುದು ಹೀಗೆ, ನಿಲ್ಲುವುದು ಹೀಗೆ, ಎಡಕ್ಕೆ ತಿರುಗಿ ಒರೆನೋಟ ಬೀರಿದರೆ ಏನಾಗುತ್ತದೆ, ಬಲಕ್ಕೆ ತಿರುಗಿ ಕಣ್ಣು ಹೊಡೆದರೆ ಹೇಗಿರುತ್ತದೆ, ಯಾವುದು ಪರಿಣಾಮಕಾರಿ ಎಂದೆಲ್ಲಾ ತಿಳಿಸಲು ಅನೇಕ ಪುಸ್ತಕಗಳು, ಪ್ರಶ್ನೋತ್ತರ ಮಾಲಿಕೆಗಳು, ಸಿದ್ಧ ಪಾಠಗಳು ಸಿಗುತ್ತಿವೆ. ಜೊತೆಗೆ ಓದುವುದು ಹೇಗೆ, ಬರೆಯುವುದು ಹೇಗೆ, ದುಡ್ಡು ಮಾಡುವುದು ಹೇಗೆ ಇಂತಹ series ತುಂಬಾ ಮಹತ್ವ ಬಂದಿದೆ. ಮೊನ್ನೆ ಪ್ರಕಾಶಕರೊಬ್ಬರು ಹೇಳುತ್ತಿದ್ದರು. ಇಪ್ಪತ್ತೈದು ಮೂವತ್ತು ರೂಪಾಯಿಗಳಿಗೆ ಪ್ರಕಟವಾಗುವ ಪುಟ್ಟ ಪುಟ್ಟ ಪುಸ್ತಕಗಳಿಗೆ ಬೇಡಿಕೆ ಹೆಚ್ಚು. ಈಗ ಅತಿ ಹೆಚ್ಚು ಮಾರಾಟವಾಗುತ್ತಿರುವುದು ಆರೋಗ್ಯ ಪುಸ್ತಕಗಳು ಮತ್ತು `ಹೇಗೆ' series ಪುಸ್ತಕಗಳು ಎಂದು.

ಐದಾರು ವರ್ಷಗಳಿಂದ ಇಂಥ ಲೇಖನಗಳು ಪ್ರತಿ ಪತ್ರಿಕೆಯಲ್ಲೂ ಬರುತ್ತಿವೆ. ಪತ್ರಿಕೆಯಲ್ಲಿ ಪ್ರಕಟವಾದ ಸಂಗ್ರಹವಾದ ಸಂಗ್ರಹ ರೂಪಗಳು ಪುಸ್ತಕ ಮೂಲಕ ಲಭ್ಯ. ಇಂಥ ಪುಸ್ತಕಗಳು, ಲೇಖನಗಳು ಬಹುಶಃ ಯಾವುದೇ ವಿಚಾರದಲ್ಲಿ ಪ್ರಾಥಮಿಕ ತಿಳಿವಳಿಕೆ ಕೊಡುತ್ತವೆ, ಕುತೂಹಲ ಹುಟ್ಟಿಸುತ್ತವೆ, ಆಸಕ್ತಿ ಮೂಡಿಸಿ ಮುಂದಿನ ದಾರಿ ಸುಗಮ ಮಾಡುತ್ತವೆ ಎಂಬ ಮಾತು ನೂರಕ್ಕೆ ನೂರು ಸತ್ಯ. ಆದರೆ, ಅತಿಯಾದರೆ ಅಮೃತವೂ ವಿಷ ಎನ್ನುವ ಹಾಗೆ ಇವು ಬರುತ್ತಿರುವ ಭರಾಟೆ, ಅಬ್ಬರ, ಗುಣಮಟ್ಟ, ಇವೆಲ್ಲ ಅಸಹ್ಯ ಹುಟ್ಟಿಸುವ ಹಾಗಿದೆ. ಇಂತಹ ಲೇಖನಗಳನ್ನು ಬರೆಯುವವರು ಯಾರು? ಅವರ ಅರ್ಹತೆ, ಜ್ಞಾನ ಒಂದೂ ಮಾನ್ಯವಲ್ಲವೇನೋ ಎಂಬ ಸಂಶಯವೂ ಕೆಲವು ಸಲ ಕಾಡುತ್ತದೆ. ಮೊನ್ನೆ ಗುತ್ತಿಗೆದಾರರೊಬ್ಬರು ಹೇಳುತ್ತಿದ್ದರು - `ಕಾಂಟ್ರಾಕ್ಟ್ ಬೇರೆ, ಮೇಸ್ತ್ರೀ ಬೇರೆ, ಕಾಂಟ್ರಾಕ್ಟರ್ಗೆ ಕರಣಿ ಹಿಡಿಯಲು ಬರಬೇಕಿಲ್ಲ.'
ಇವೆಲ್ಲಾ ಹಣ ಮಾಡುವ ಉದ್ಯೋಗಗಳು ಅಷ್ಟೆ. ಯಾವ ಊರಿನಲ್ಲಿ ಎಷ್ಟು ಕ್ಯಾಂಪ್ ನಡೆಸಬಹುದು, ಯಾವ ವಿಷಯಕ್ಕೆ ಅಸಕ್ತಿಯುಳ್ಳ ಜನರಿದ್ದಾರೆ ಎಂಬಂಥ ಅಂಶಗಳನ್ನು ಕಲೆ ಹಾಕಿ, ಸೂಕ್ತ ಪ್ರಚಾರ ಕೊಟ್ಟು, ಒಂದಷ್ಟು ವಿಷಯ ತಿಳಿಸಿದರೆ ಸಾಕು ಹೊಟ್ಟೆಪಾಡು ನಡೆಯುತ್ತದೆ. `ನಾನೇನು ನನ್ನ ಯೋಗ್ಯತೆ ಏನು, ಓದಿದಂತೆ, ಅಥವಾ ನುಡಿದಂತೆ ನಡೆಯುತ್ತೇನಾ' ಎಂಬೆಲ್ಲ ವಿಚಾರಗಳು ಯಾರಿಗೆ ಬೇಕು? ಅಸಲು ಯಾರಾದರೂ ಒಳ್ಳೆಯದನ್ನು ಹೇಳಿದಾಗ `ವಿಷಯವನ್ನು' ಗ್ರಹಿಸಬೇಕೇ ಹೊರತು `ವ್ಯಕ್ತಿಯನ್ನೇಕೆ ನೋಡಬೇಕು ಎಂಬ ವಾದವೂ ಇದೆ. ಹಾಗಾಗಿಯೇ ಇಂದು ವ್ಯಕ್ತಿಗಳು ಸಿಗುವುದಿಲ್ಲ, ವಿಷಯಗಳು ಸಿಗುತ್ತವೆ.

ಹೊಟ್ಟೆಪಾಡು ಮತ್ತು ಮಾರ್ಕೆಟಿಂಗ್ ಮಧ್ಯೆ ನಾವು ಕಳೆದು ಹೋಗುತ್ತಿಲ್ಲವೇ? ಹೃದಯದ ಪಾಡೇನು? ಮನಸ್ಸಿನ ಪಾಡೇನು? ಮನಸ್ಸು, ಹೃದಯ ಇಲ್ಲದ ಸಮಾಜದ ಪಾಡೇನು? ಮನಸ್ಸಿನ ಮಾತುಗಳನ್ನು ಪೂರ್ತಿಯಾಗಿ ಆಡಬೇಡಿ. ತಡೆಯಿರಿ. ಎದುರುಗಡೆ ಯಾರಿದ್ದಾರೆಂದು ನೋಡಿ ಅವರಿಗೆ ತಕ್ಕ ಹಾಗೆ ವರ್ತಿಸಿ . ಕಣ್ಣುಗಳನ್ನು ಹೀಗೇ ಮಿಟುಕಿಸಿ. ಕೈಕಾಲುಗಳನ್ನು ಹೀಗೇ ಆಡಿಸಿ. ಇಂತಹುದನ್ನು ಓದುತ್ತಾ ಓದುತ್ತಾಬೆಳೆಸಿಕೊಂಡ ನಮ್ಮ ವರ್ತನೆಗಳು ನಿಜಕ್ಕೂ ಅಂತರಂಗವನ್ನು ಅರಳಿಸುತ್ತವೆಯೇ?
ನಾವು ಮುದ್ದಾಗಿ ಕಾಣುವ , ತಮ್ಮನ್ನು ತಾವು ಪ್ರಸ್ತುತಪಡಿಸಿಕೊಳ್ಳಲು ಬರುವ ಒಂದು ವರ್ಗವನ್ನು ಸೃಷ್ಟಿ ಮಾಡುತ್ತಿಲ್ಲವೇ? ಅಕಸ್ಮಾತ್ ದಾರಿಯಲ್ಲಿ ಬಿದ್ದುಬಿಟ್ಟರೆ ತಾವಾಗಿಯೇ ಏಳುವುದು ಹೇಗೆಂದು ಇವರಿಗೆ ತೊಚುವುದಿಲ್ಲ. ಏಕೆಂದರೆ `ಬಿದ್ದಾಗ ಏಳುವುದು ಹೇಗೆ?' ಎಂಬ ಪುಸ್ತಕ ಪ್ರಕಟವಾಗದೇ ಇರುವುದರಿಂದ ಇವರು ಅದನ್ನು ಓದಿರುವುದಿಲ್ಲ. ಹಾಗೇ ಯಾರಾದರೂ ಬಿದ್ದಾಗ, ಅವರ ಬಳಿ ಹೋಗಿ ಕಾಪಾಡ ಬೇಕೆನ್ನುವುದೂ ಇವರಿಗೆ ತಿಳಿಯಲಾರದು. ಅದು ಅವರ ತಪ್ಪಲ್ಲ.
ಮೊನ್ನೆ ಹದಿನೆಂಟರ ಯುವತಿಯೊಬ್ಬಳು , ತಾನು ಮಾಡಿದ ತಪ್ಪಿಗೆ ನಗನಗುತ್ತಾ ಸಾರಿ ಕೇಳಿದಳು. ತಪ್ಪು ಮಾಡಿದಾಗ ಸಾರಿ ಕೇಳಿ ಎಂಬುದು ವ್ಯಕ್ತಿತ್ವ ವಿಕಸನದ ಪಾಠ. ಹಾಗಾಗಿ ಆ ಸಾರಿಯಲ್ಲಿ ಯಾವ ತಪ್ಪಿತಸ್ಥ ಭಾವನೆಯೂ ಇರಲಿಲ್ಲ. ಮರುದಿನ ಪುನಃ ಅದೇ ತಪ್ಪು! ಅದೇ ಸಾರೀ! ಅದೇ ನಗು! ಬೇಕೆಂದೇ ಕೈಕಾಲುಗಳನ್ನು ಆಡಿಸುತ್ತ, ಕಣ್ಣು ಮಿಟುಕಿಸುತ್ತಾ, ಬಲವಂತವಾಗಿ ನಗುವ, ಎಲ್ಲರನ್ನೂ ಇಂಪ್ರೆಸ್ ಮಡಲು ಹೊರಡುವ ಈ `ವಿಕಾಸದ ಕೂಸು'ಗಳನ್ನು ನೋಡಿಧಾಗ ಮರುಕವೆನಿಸುತ್ತದೆ.
ಗಮನಿಸಿ ನೋಡಿ , ಎಲ್ಲ ವ್ಯಕ್ತಿತ್ವ ವಿಕಸನ ಪುಸ್ತಕ ಪಾಠ, ಪ್ರವಚನಾದಿಗಳು ಹೇಳುವುದು `ನಾನು' ಬಗ್ಗೆ. ನನ್ನ ಸಂತೋಷ, ನನ್ನ ವ್ಯಕ್ತಿತ್ವ, ನನ್ನ ಉನ್ನತಿ ಮತ್ತು ನಾನೇ ನಂಬರ್ ಒನ್ ಆಗಬೇಕೆಂಬ ಮೂಲಮಂತ್ರ. ನಾವು ಸಮಷ್ಟಿಯಲ್ಲಿ ಬಂದವರು, ಇತರರಿಂದ ನಾವು, ಸಮಾಜದಿಂದ ನಾವು, ನಾವು ಇಂಪ್ರೆಸ್ ಮಾಡಬೇಕಾಗಿರುವುದು ನಮ್ಮ ಜ್ಞಾನದಿಂದ ಮಾಡುವ ಕೆಲಸಗಳಿಂದ ಹಾವ-ಭಾವಗಳಿಂದ ಅಲ್ಲ ಎಂಬುದನ್ನು ವಿಕಾಸದ ಪಾಠ ಓದಿದವರಿಗೆ ಹೇಳಲು ಆಗುವುದೇ ಇಲ್ಲ.
ಸಾಲು ಮರದ ತಿಮ್ಮಕ್ಕನಿಗೆ ಗೊತ್ತಿಲ್ಲ. ಆಕೆಗೆ ತಾನು ನಂ.1 ಆಗಬೇಕು ಎಂಬ ಗುರಿಯೂ ಇರಲಿಲ್ಲ. ತನ್ನ ಸಹಜ ಅಂತರಂಗದ ತುಡಿತಕ್ಕೆ ಕೆಲಸ ಮಾಡಿದಳು. ನಮಗೆ ನಂ.1 ಜೊತೆ ಸ್ಪರ್ಧೆ ಬೇಕೋ ನಮ್ಮ ಸಹಜದ ಆನಂದ ಬೇಕೋ ಎಂಬ ನಿರ್ಧಾರ ನಮ್ಮದೆ ಅಲ್ಲವೇ? ಆಡಂಬರ, ಅಸಹಜತೆ, ಅಬ್ಬರ ಬೇಕೆ? ಮನಸ್ಸಿನ ಜ್ಞಾನ ಅನುಭವಗಳಿಂದ ಬಂದ ತಿಳುವಳಿಕೆಗಳು ವ್ಯಕ್ತಿಯನ್ನು ವಿಕಾಸದೆಡೆಗೆ ಕರೆದೊಯ್ಯುತ್ತವೆ. ಅಂತರಾತ್ಮ ಶುದ್ಧ ಆನಂದದಿಂದ ಅರಳಿದರೆ, ಕಣ್ಣುಗಳಲ್ಲಿ ಆ ಪ್ರಭೆ ತಾನಾಗಿಯೇ ಗೋಚರಿಸುತ್ತದೆ. ಹಾಗಾಗಿ ಗುರಿ ಜ್ಞಾನದೆಡೆಗೆ ಇರಲಿ, ಉತ್ತಮವಾದುದಾಗಿರಲಿ. ಇಂಪ್ರೆಸ್ ಮಾಡುವಂಥದ್ದು ಬೇಡ.
ನಗು ಬಂದಾಗ ಹಾಯಾಗಿ ನಗೋಣ, ಅಳು ಬಂದರೆ ಅತ್ತು ಹಗುರಾಗೋಣ. ಸಹಜವಾಗಿ ಶಿಳ್ಳೆ ಹೊಡೆಯುತ್ತಾ ಸಾಗೋಣ. ನಮ್ಮ ಬದುಕು ರೈಲು ಗಾಡಿಯಂತೆ, ಒಂದಕ್ಕೊಂದು ಹೆಣೆದುಕೊಂಡೇ ಚಲಿಸಬೇಕು. ಪ್ರತ್ಯೇಕ ಬೋಗಿ ಇರಲಿ. ಅದು ನೀವು. ಆದರೆ `ನೀವೇ ಎಲ್ಲ ಅಲ್ಲ'. ಬೋಗಿ ರೈಲಲ್ಲ.