Friday, July 2, 2010

ಹೊಸ ರಾಗವಿದೂ ........

    ಪ್ರಸಾರ ಅಂದ ಕೂಡಲೇ ನಮ್ಮ ಕಿವಿಯಲ್ಲಿ ಒಂದು ಮಧುರ ನಾದ. ಕಣ್ಣ ಮುಂದೆ ಚಿತ್ರಗಳ ಸಾಲು.. ಮನದಲ್ಲಿ ಒಂದು ಚೆಂದದ ಅನುಭೂತಿ!.. ಪ್ರಸಾರಕ್ಕೆ ಬೇರೆ ಬೇರೆ ಅರ್ಥಗಳು ಇರಬಹುದು. ಆದರೆ ಅದು ಹೆಚ್ಚಾಗಿ ಹೊಂದಿಕೊಂಡು ನಡೆದು ಬಂದಿರುವುದು ರೇಡಿಯೋ, t v   ಜೊತೆ ಜೊತೆಗೆ ಎಂದರೆ ಸರಿ ಆದೀತು. 
  ಪ್ರಸಾರ ಸಾರವತ್ತಾಗಿರಬೇಕು, ಕೆಲವರ ಸವಲತ್ತಾಗಬಾರದು ಎಂಬುದು ನಂಬಿಕೆ, ಆದರ್ಶ.ಪ್ರಸಾರ ಶ್ರೋತ್ರು ಅಥವಾ ವೀಕ್ಷಕ ಇಷ್ಟಪಡುವ ಹಾಗೆ ಇರಬೇಕು ಅನ್ನೋದು ಮತ್ತೊಂದು ತತ್ವ.. ಪ್ರಸಾರ ಅಂದರೆ ಅದು ಮನರಂಜನೆ, ಜ್ಞಾನ, ಮಾಹಿತಿ ಇವುಗಳ ಮಿಶ್ರಣ ಅನ್ನೋದು ಓಬಿರಾಯನ ಕಾಲದಿಂದ ಎಲ್ಲ ಘೋಷಣೆ ಮಾಡ್ತಾ ಇರೋ ಸಾಲು.
 ಪ್ರಸಾರ ಅಂದರೆ ಅದು ಒಂದೇ , ಆಕಾಶವಾಣಿ ದೂರದರ್ಶನ ಅನ್ನೋ ಆ  ಕಾಲದಲ್ಲಿ ಅದು ಹದವಾಗಿತ್ತು, ಹಾಡಾಗಿತ್ತು, ಹೊನಲಾಗಿತ್ತು.. ..
  ಈಗ?
    ಪ್ರಸಾರ  ಮತ್ತು ಪ್ರಚಾರ  ಒಂದೇ ಅರ್ಥ ಪಡೆದುಕೊಳ್ತಾ ಇದೆ ಅಂದ್ರೆ ಅದು ತಪ್ಪಾಗಲಾರದು. ಮಾಧ್ಯಮಗಳ ನೀತಿ ಬದಲಾಗುತ್ತಿದೆ. ಜಾಗತಿಕ ರಂಗದಲ್ಲಿ ಸ್ಪರ್ಧೆಗೆ ಮೈ ಒಡ್ಡಿ ನಿಂತಿರುವ ಈ ಬದಲಾವಣೆಯ ಪರ್ವದಲ್ಲಿ ಪ್ರಸಾರದ ಕಲ್ಪನೆಗಳು ಹೊಸ ಆಯಾಮ ಪಡೆದು ಕೊಳ್ತಾ ಇವೆ. 
   ಆಕಾಶವಾಣಿ ಅಂಗಳದಲ್ಲಿ ಬೇಂದ್ರೆ ನಗ್ತಾ ನಿಲ್ತಿದ್ರು... ದೊರೆಸ್ವಾಮಿ ಅಯ್ಯಂಗಾರ್ ಸಂಗೀತ ವಿಭಾಗದ ಉಸ್ತುವಾರಿ ಹೊತ್ತಿದ್ರು.. ಅಡಿಗರ ಭೂಮಿಗೀತ ಅಕಾಶವಾಣಿ ಗಾಗಿಯೇ ಮೊದಲು ಹುಟ್ಟಿತು.. ಹೀಗೆ  ಮಾತುಗಳನ್ನು ಕೇಳ್ತಾ ಇರ್ತೀವಿ.. ದೂರದರ್ಶನದ ಒಂದು ಕನ್ನಡ ಕಾರ್ಯಕ್ರಮಕ್ಕಾಗಿ ಹೇಗೆ ಜನ ಕಾಯ್ತಾ ಕೂತುಕೊಳ್ತಿದ್ರು.. ಅಂತ ನಮಗೆಲ್ಲ ಗೊತ್ತು... 
  ಅದು ಭಾವ ಸಂಗಮ!  ಪ್ರಸಾರ ತಾಣಗಳು ಚರ್ಚೆಯ ಆವರಣ! ರಾಗ ತಾಳಗಳ ಮಿಲನ!.... 
   ಅದಕ್ಕೆ ಅದು ಎದುರಿನ  ವ್ಯಕ್ತಿಯ ಸ್ಪಂದನವೂ ಆಗಿರ್ತಿತ್ತು!!
   ಒಂದು ಅರ್ಧ ಗಂಟೆ ನಾಟಕ, ಅಥವಾ ಕಾರ್ಯಕ್ರಮ ಪ್ರಸಾರ ಕಾಣಲು ಕನಿಷ್ಠ ೬-೭ ದಿನಗಳು ಬೇಕಾಗ್ತಾ ಇತ್ತು.. rehearsal ನಲ್ಲಿ ಪಾಲ್ಗೊಂಡು ಕಾಯಬೇಕಾಗುತ್ತಿತ್ತು. ಆಕಾಶವಾಣಿ, ದೂರದರ್ಶನದ ಪ್ರಸಾರ ನಿಜ ಅರ್ಥದಲ್ಲಿ ಮನಸು ಮನಸುಗಳ ನಡುವಿನ ಪ್ರಸಾರ ಆಗಿರ್ತಾ ಇತ್ತು ಅನ್ನಬಹುದು.. 
 ಪ್ರಸಾರ ಮತ್ತು ಪ್ರಚಾರ ಒಂದೇ ಆಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ, ಚಿತ್ರಗೀತೆಗಳು ಬಕಾಸುರನಂತೆ ಎಲ್ಲ ಕಡೆ ಬಾಯಿ, ಹೊಟ್ಟೆ ಹರಡಿ ಕುಳಿತಿವೆ... ಚಿತ್ರಗೀತೆ ಬಿಟ್ಟರೆ ಪ್ರಸಾರಕ್ಕೆ ಬೇರೆ ಸಾಮಗ್ರಿ ಇದೆ ಅನ್ನೋದು ಯಾಕೋ ಹೆಚ್ಚಿನವರ  ಗಮನಕ್ಕೆ  ಬರುತ್ತಿಲ್ಲ .FM ಖಾಸಗಿ ವಾಹಿನಿಗಳು ಪ್ರಸಾರ ಅನ್ನೋ ಪದದ ಕಲ್ಪನೆಯನ್ನೇ ಬದಲಾಯಿಸಿವೆ.
   ಕಿರುತೆರೆ ಸ್ವಲ್ಪ ವಾಸಿ. ವಿವಿಧ ವಿಷಯಗಳಿಗೆ ವಿವಿಧ ಸಮಗ್ರ channel    ಗಳೇ ಇವೆ. ಆದರೆ ಬಾನುಲಿರಂಗದಲ್ಲಿ ಇಷ್ಟು ವಿಸ್ತಾರ ಕಾಣುತ್ತಿಲ್ಲ. ದೊಡ್ಡ ನಗರಗಳಲ್ಲಿ 8-10 ಚಾನೆಲ್ ಗಳು ಇದ್ದರೂ    ಎಲ್ಲವೂ ಪೂರ್ಣ ಹಿಂದಿ, ಹಾಗು ಸ್ಥಳೀಯ ಚಿತ್ರಗೀತೆಗಳಿಗೆ ಮೀಸಲಾಗಿವೆ.ಒಂದು  ಶೋ,ಒಬ್ಬ guest ,ಒಂದಷ್ಟು ಮಾತು, ಒಂದಷ್ಟು ಹರಟೆ, ಬಿಟ್ಟರೆ ಬೇರೆ ಬಗೆಯ ಧ್ವನಿಮುದ್ರಿತ ಆಯೋಜಿತ, ಕಾರ್ಯಕ್ರಮಗಳು ಕಣ್ಮರೆ ಕಿವಿಮರೆ ಆಗ್ತಾ ಇವೆ.
 ನೇರ ಪ್ರಸಾರಗಳ ಮಜಾ ಈಗ ಸಜಾ ಆಗುತ್ತಿದೆ.. ತಯಾರಿ ಇಲ್ಲದೆ ಟೈಮ್ ರೈಲು ಓಡಿಸುತ್ತಿದ್ದಾರೆ ಎಲ್ಲ ತಳ್ಳು ಮಾಡೆಲ್ ಗಾಡಿಗಳೇ!! 
  ಈಗ ಕಲಾವಿದರಿಗೆ ಬಿಡುವಿಲ್ಲ. ಪ್ರಚಾರ ಮುಖ್ಯ.  
   ನಗರದಲ್ಲಿ ಆಯೋಜಿತವಾಗಿರುವ ಕಾರ್ಯಕ್ರಮಗಳ ಪ್ರಚಾರ, ಬಿಡುಗಡೆ ಆಗಲಿರುವ ಚಿತ್ರಗಳ ಪ್ರಚಾರ ಅಭಿವೃದ್ಧಿ ಆಗಿದೆ ಅಂತ prove A ಮಾಡಲು ಸರ್ಕಾರ ನಡೆಸೋ ಪ್ರಚಾರ , ಚಾನೆಲ್ ಪ್ರಚಾರಕ್ಕೆ ನಡೆಸೋ ವೈಯುಕ್ತಿಕ ಪ್ರಚಾರ ..... .. top1  ಅಂತ ಹೇಳಿಕೊಳ್ಳಲು ಪ್ರಚಾರ...   ಹೌದು. ಆಗಿನ ಪ್ರಸಾರದಲ್ಲಿ ' ಸಾರ' ಇತ್ತು.. ಈಗಿನ ಪ್ರಚಾರದಲ್ಲಿ 'ಚಾರ' ಅಂದರೆ ಲೆಕ್ಕಾಚಾರ ಇದೆ..
   channel  ಗೆ ಹಣ ನೀಡಿ, ಸಮಯ ಕೊಂಡುಕೊಳ್ಳಿ, ನಿಮಗೆ ಬೇಕಾದ ಆಚಾರ ಆರಿಸಿಕೊಳ್ಳಿ.
   ದೊಡ್ಡ ದೊಡ್ಡ ಹೆಸರಾಂತ ಕಲಾವಿದರೂ ಕೂಡ ಪ್ರಚಾರಕ್ಕೆ ಸಂದರ್ಶನ ಕೊಡ್ತಾರೆ ಹೊರತು ಸಾರ ಅಂದಾಗ.. ಸಾರೀ  ಅಂತಾ ಇದ್ದಾರೆ.
     ಪತ್ರಿಕಾ ಸಂಪಾದಕರು, ಪತ್ರಕರ್ತರು, ಹಾಡುಗಾರರು, electronic ಮಾಧ್ಯಮದ  ಪ್ರಸಾರದ ರೂಪುರೇಷೆಗಳ ಮೂಲ ಕಲ್ಪನೆಯೂ ಇಲ್ಲದವರು, ಇಂದು, ಪ್ರಚಾರದ ಸಾಮಗ್ರಿಗಳಾಗುತ್ತಿದ್ದಾರೆ. 
  ಪ್ರಚಾರ  ಯಾವುದು, ಪ್ರಸಾರ ಯಾವುದು ಅಂತ ನಿರ್ಧರಿಸೋ ಸಮಯ ವ್ಯವಧಾನ ಮಾಧ್ಯಮಗಳಿಗೆ ಇಲ್ಲ. ಅರಿವು ಹುಟ್ಟಬೇಕಾದ ಮುಖ್ಯ ಸ್ಥಳಗಳೆ ಮೌನ ತಾಳಿವೆ. ಅಂತರಗಂಗೆ ಬತ್ತುತ್ತಿದೆ.  
  ನಾವೆಲ್ಲಾ ಪ್ರಹಾರಕ್ಕೆ ನಮ್ಮನ್ನು ನಾವು ಒಡ್ಡಿಕೊಳ್ಳುವುದು ಇಂದಿನ ಅನಿವಾರ್ಯ.. 
  ಇದು ಬದಲಾವಣೆಯೇ? ಹೊಸ ಸವಾಲೇ?