ಧ್ವನಿಬಿಂಬ 11
ಪರೀಕ್ಷೆಗಳು ಹತ್ತಿರ ಬಂದವು. ವಿದ್ಯಾರ್ಥಿಗಳಿಗೆ ಪೋಷಕರಿಗೆ ಆತಂಕ.
ಕೊರೊನಾ ,online , offline ಈ ಗೊಂದಲಗಳಲ್ಲಿ ಯಾರು ಎಷ್ಟು ಕಲಿತಿದ್ದಾರೋ.. ಏನು ಬರೆಯುತ್ತಾರೋ ತಿಳಿಯದು.
ಪರೀಕ್ಷೆ ಬರೆಯಲು ಮಾತ್ರ ಓದಬೇಕೇ.
"ನಾನು ಪರೀಕ್ಷೆ ಬರೆಯಲಾರೆ. ಆದರೆ ನನಗೆ ವಿಷಯ ಗೊತ್ತು, "ಎನ್ನುತ್ತಾನೆ ಒಬ್ಬ..
" ಕೊನೆಯ ದಿನದವರೆಗೆ ಓದಿರಲಿಲ್ಲ, ಗೆಳೆಯನಿಗೆ ಕರೆ ಮಾಡಿ ಸುಮ್ಮನೆ ಅವನಿಂದ ಒಮ್ಮೆ ಮುಖ್ಯವಾದ ವಿಚಾರ ಓದಿಸಿಕೊಳ್ಳುತ್ತೇನೆ. ವಿವರಿಸು ಎನ್ನುತ್ತೇನೆ. ಕೇಳುತ್ತೇನೆ. ಆ ಕೇಳ್ಮೆ ಆಧಾರದಲ್ಲಿ ಬರೆಯುತ್ತೇನೆ.
ನನಗೆ ಅವನಿಗಿಂತ ಜಾಸ್ತಿ Marks ಬರುತ್ತೆ ಯಾವಾಗಲೂ ಹಾಗೇ.. "ಎಂದು ಹೇಳುತ್ತಾನೆ. ಒಬ್ಬ ವಿದ್ಯಾರ್ಥಿ.
"Text book ಕೊಟ್ಟರೂ ಅವನು ಉತ್ತರ ಬರೆಯಲಾರ "ಎಂದು ಮತ್ತೊಬ್ಬನ ಬಗ್ಗೆ ಉವಾಚ.
ತುಂಬಾ ಮಂದಿ ಪ್ರಸಿದ್ಧ ನಾಮರು "ನಾನು ಓದಲಿಲ್ಲ, ನನಗೆ ವಿದ್ಯೆ ತಲೆಗೆ ಹತ್ತಲಿಲ್ಲ " ಎಂದು ಹೇಳುವುದನ್ನು ಕೇಳಿದ್ದೇವೆ.
ಹಾಗಾದರೆ ಏನು ಈ ಓದು?
ವಿದ್ಯೆ ಅಂದರೆ ಏನು?
1632 ರಲ್ಲೇ ಭೂಮಿ ಚಲಿಸುತ್ತದೆ, ಭೂಮಿ ಗುಂಡಗೆ ಇದೆ , ಸೂರ್ಯ ಒಂದೇ ಕಡೆ ಇದ್ದಾನೆ ಎಂಬ ವಿಚಾರಗಳನ್ನು ವಿವರಿಸಿ ಹೇಳಿದ ಗೆಲಿಲಿಯೋ .
ಅವನ ವಿದ್ಯೆ, ಅವನ ಸಂಶೋಧನೆ ಅಂಗೀಕಾರವಾಗದೆ ಸಂಪ್ರದಾಯವಾದಿಗಳು ಅವನ ವಿರುದ್ಧ ಅಪಪ್ರಚಾರ ಮಾಡಿದರು. ಇಲ್ಲದ ಆರೋಪ ಹೊರಿಸಿದರು..
ಅವನು ದೇವಾಲಯದಲ್ಲಿ ಮಂಡಿಯೂರಿ ಕುಳಿತು " ಇದುವರೆಗೆ ನಾನು ಬರೆದದ್ದು ಬೋಧಿಸಿದ್ದು ಸುಳ್ಳು, ಭೂಮಿ ಚಲಿಸುತ್ತಿಲ್ಲ " ಎಂದು ಹೇಳುವಂತೆ ಒತ್ತಾಯ ಮಾಡಿದರು.
ಅವನಿಗೆ ಶಿಕ್ಷೆ ನೀಡಿದರು.
ಗೆಲಿಲಿಯೋ ಹಾಗೆ ಹೇಳಿ ಮೇಲೆ ಏಳುತ್ತಾ
"ನಾನು ಹೀಗೆ ಹೇಳಿದ್ದಕ್ಕೆ ಭೂಮಿ ಚಲನೆ ಖಂಡಿತ ನಿಲ್ಲುವುದಿಲ್ಲ" ಎಂದು ಗೊಣಗಿದನಂತೆ.
ವಿದ್ಯೆ ಸೋತಿತೆ?
ಜ್ಞಾನ ಏನಾಯಿತು ?
ಜ್ಞಾನ, ವಿದ್ಯೆ, ವೈಚಾರಿಕತೆ, ವಿವೇಚನೆ, ಮತ್ತು ಚಿಂತನೆ ಈ ಪದಗಳನ್ನು ಮೇಲಿಂದ ಮೇಲೆ ಹೇಳುತ್ತೇವೆ. ಆದರೆ,
ಅವುಗಳ ನಿಜದ ಅರ್ಥದಲ್ಲಿ ಅವು ಅರಳಿ ಬಾಳಿ ಬದುಕಿ ಬಂದಿದೆಯೇ?
ವಿದ್ಯಾವಂತರು , ಚಿನ್ನದ ಪದಕ ವಿಜೇತರು , ಬುದ್ಧಿವಂತರು ಎನಿಸಿಕೊಂಡವರು ಕೊಡುವ ಹೇಳಿಕೆಗಳು, ಮಾತನಾಡುವ ಪರಿ ನೋಡಿದಾಗ ಆಶ್ಚರ್ಯವಾಗುತ್ತದೆ.
ಒಂದು ವಿದ್ಯೆ ಪ್ರಮಾಣ ಪತ್ರ ಪದವಿ ಗಾಗಿ
ಹೊಟ್ಟೆ ಹೊರೆದುಕೊಳ್ಳಲು. ಕೆಲಸ ಪಡೆಯಲು.
ಇನ್ನೊಂದು ಅಧ್ಯಯನ , ಸ್ನಾತಕೋತ್ತರ,
ಜ್ಞಾನಾರ್ಜನೆ , ಬೋಧನೆ, .
ಆದರೂ..
ಜ್ಞಾನಿಗಳನ್ನೂ ಸಮಾಜ ಕೆಲವೊಮ್ಮೆ ಒಪ್ಪುವುದಿಲ್ಲ,
ವಿದ್ಯಾವಂತ ತನ್ನ ಅಸಮರ್ಥತೆ ಕಾರಣ ಪ್ರಮಾಣ ಪತ್ರ ಹಿಡಿದರೂ ಮತ್ತೊಬ್ಬರನ್ನು ಬೈಯ್ಯುತ್ತಾ ಅನ್ನುತ್ತಾ ತನ್ನ ಬೇಳೆ ಬೇಯಿಸಿಕೊಳ್ಳುತ್ತಿರುತ್ತಾನೆ.
ಜ್ಞಾನಿ ಗೆಲಿಲಿಯೋ ರೀತಿ ತಿರಸ್ಕಾರಕ್ಕೆ ಒಳಗಾಗುತ್ತಿರುತ್ತಾನೆ.
ತನ್ನ ಜ್ಞಾನದ ಪರಿಧಿಯನ್ನು ಅರ್ಥ ಮಾಡಿಸದೆ ವದ್ದಾಡುತ್ತಾನೆ.
ಜಗತ್ತು ಜ್ಞಾನಿಯನ್ನು ನಂಬುವುದೇ ಇಲ್ಲ.
ವಿದ್ಯಾವಂತ, ಜ್ಞಾನಿ, ಅಲ್ಲದ ಸಾಮಾನ್ಯ ವ್ಯಕ್ತಿ
ಗೌರವಾದರಗಳಿಗೆ ಪಾತ್ರನಾಗುತ್ತಾನೆ.
ಇದು ವಿಸ್ಮಯವೇ ಸರಿ.
ಜ್ಞಾನಿಗೆ ವಿದ್ಯಾವಂತನಿಗೆ ಮೂಲಭೂತವಾಗಿ ಇರಬೇಕಾದದ್ದು, ವಿವೇಚನೆ.
ಲೋಕಹಿತಚಿಂತನೆ.
ox ford ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕ ಸ್ಥಾನಕ್ಕೆ ವಿದ್ಯಾಂಸರನ್ನು ಆಯ್ಕೆ ಮಾಡಬೇಕಿತ್ತು. ಬಹಳ ಮಂದಿ ಅರ್ಜಿ ಹಾಕಿದರು.
ಇವರಲ್ಲಿ ಮ್ಯಾಕ್ಸ್ ಮುಲ್ಲರ್ ಮತ್ತು
ವಿಂಟರ್ ನೀಟ್ಸ್ ಎಂಬ ಬಹುಶ್ರೇಷ್ಠ ವಿದ್ಯಾಂಸ ರಿದ್ದರು.
ಆಯ್ಕೆ ಸಮಿತಿ ಸಂದರ್ಶನಕ್ಕೆ ಕರೆಯಿತು. ಇಬ್ಬರಲ್ಲಿ ಒಬ್ಬರು ಆಯ್ಕೆ ಆಗಬೇಕು.
ಆಯ್ಕೆ ಸಮಿತಿ ಸಂದರ್ಶನದಲ್ಲಿ ಮ್ಯಾಕ್ಸ್ ಮುಲ್ಲರ್ ನನ್ನು " ಈ ಸ್ಥಾನಕ್ಕೆ ಅತ್ಯಂತ ಸೂಕ್ತ ವ್ಯಕ್ತಿ ಯಾರು ?" ಎಂದು ಕೇಳಿದಾಗ
ಆವರು " ಹೊರಗೆ ವಿಂಟರ್ನಿಟ್ಸ್ ಕುಳಿತಿದ್ದಾರೆ ಅವರೇ ಅರ್ಹರು.
ಅವರು ಅರ್ಜಿ ಹಾಕಿದ್ದು ತಿಳಿದಿದ್ದರೆ ತಾನು ಹಾಕುತ್ತಿರಲಿಲ್ಲ " ಎಂದು ಉತ್ತರಿಸಿದರು.
ಇದೇ ಪ್ರಶ್ನೆಯನ್ನು ನಂತರ ವಿಂಟರ್ನಿಟ್ಸ್ ಅವರನ್ನು ಕೇಳಲಾಯಿತು..
ಅವರು "ಹೊರಗಡೆ ಮಾಕ್ಸ್ ಮುಲ್ಲರ್ ಕುಳಿತಿದ್ದಾರೆ ಅವರೇ ಈ ಸ್ಥಾನಕ್ಕೆ ಅರ್ಹರು"
ಎಂದು ಹೇಳಿದರು.
ಮ್ಯಾಕ್ಸ್ ಮುಲ್ಲರ್ ಹಾಗೂ ವಿಂಟರ್ನಿಟ್ಸ್ ಇಬ್ಬರೂ ವಿದ್ಯೆಯ ಜ್ಞಾನದ ಘನತೆಯನ್ನು ಮೆರೆದಿದ್ದರು. ಸಂಸ್ಕೃತಿಯ ಬೆಳಕನ್ನು ಪಸರಿಸಿದವರು,
ಸಣ್ಣತನಗಳಿಂದ ಬಿಡುಗಡೆ ಪಡೆಯುವುದೇ ನಿಜವಾದ ವಿದ್ಯೆ ಅಲ್ಲವೇ?
ಎಂದು ಪ್ರೊ ಎಲ್.ಎಸ್. ಶೇಷಗಿರಿರಾಯರು ಒಂದು ಕಡೆ ಕೇಳುತ್ತಾರೆ..
ವಿದ್ಯೆ ಬೆಳಕು ಕೊಡಬೇಕು.
ಸತ್ಯದ ದಾರಿ ತೋರಿಸಬೇಕು.
ಇಲ್ಲವಾದರೆ, ಅದು ನಿಘಂಟಿನ ಶಬ್ದದ ಹಾಗೆ,
ತಾನೇ ತಾನಾಗಿ ಬಳಕೆಗೆ ಬಾರದ ಪದದ ಹಾಗೆ, ನಿಘಂಟಿನಲ್ಲಿ ಸಾವಿರಾರು ಪದಗಳು ಇವೆ. ಆದರೆ ಒಂದರ ಜೊತೆ ಒಂದು ಬೆರೆಯದೆ ಅರ್ಥ ಬರಲಾರದಷ್ಟೇ !
ಹಾಗೇ ವಿದ್ಯೆ, ಜ್ಞಾನ,
ವಿವೇಚನೆಯ ಮುತ್ಸದ್ದಿ ಬೆಳಕು ಕಾಣದಿದ್ದರೆ
ಅದನ್ನು ಏನನ್ನಬೇಕು?
ಯುದ್ಧ. ಚುನಾವಣೆ , ಯೋಜನೆ. ಉತ್ಸವ' ಪರೀಕ್ಷೆ ಪ್ರಮಾದ ಏನೇ ಆದರೂ ಮಾತನಾಡಿ ತಮ್ಮದೇ ವರ್ಗ ಬೆಳೆಸುವ ಹುನ್ನಾರದಲ್ಲಿ ತೊಡಗಿರುವ " ಜ್ಞಾನಿಗಳನ್ನು " 'ಸಮಾಜ ಗುರುತಿಸಬಲ್ಲುದೇ?
ವಿದ್ಯೆ ಜ್ಞಾನ ವಿವೇಚನೆ ಯ ನಡುವಣ ರೇಖೆಗಳು ಸ್ಪಷ್ಟವಾಗುವುದು ಹೇಗೆ?