Monday, August 2, 2010

ನಿರೂಪಣೆ , ಯಾರ ಹೊಣೆ?




ನಿರೂಪಣೆ , ಯಾರ ಹೊಣೆ?

ಇತ್ತೀಚೆಗೆ, ರೇಡಿಯೋ ಚಾನೆಲ್ ಒಂದರ ವಿರುದ್ಧ ಚಿತ್ರರಂಗದವರು ಬಂಡೆದ್ದರು. ಕಾರಣ, ಆ ಚಾನೆಲ್ ನಲ್ಲಿ ಪ್ರಸಾರವಾದ ಒಂದು ವಿಷಯ ಅವಹೇಳನಕಾರಿಯಾಗಿತ್ತು ಎಂಬುದು.
ಹೀಗೆ ಮಾಧ್ಯಮಗಳ ವಿರುದ್ಧ ಒಂದು ವ್ಯಕ್ತಿ, ಸಮುದಾಯ, ಗುಂಪುಗಳು ಆಗಾಗ ತಿರುಗಿ ಬೀಳುವುದನ್ನು ಮಾನ ನಷ್ಟ ಮೊಕದ್ದಮೆ ಹೂಡುವುದನ್ನು ನಾವು ನೋಡಿದ್ದೇವೆ.
ಈ ಚಲನ ಚಿತ್ರ ಬ್ರಾಹ್ಮಣ ವಿರೋಧಿ, ಈ ಕಥೆ ಮುಸ್ಲಿಂ ವಿರೋಧಿ, ಈ ಪುಸ್ತಕ ಸ್ತ್ರೀ ವಿರೋಧಿ... ಅನ್ನುವಂಥ ಮಾತುಗಳ ಜೊತೆ, ಸಂಬಂಧ ಪಟ್ಟವರ ವಿರುದ್ಧ ಗಲಾಟೆ, ಬಂಡಾಯ, ಆಗುವುದನ್ನೂ ನಾವು ಆಗಾಗ ನೋಡಿದ್ದೇವೆ.
ಇಂತಹುದಕ್ಕೆ ಒಬ್ಬ ಕರ್ತೃ ಇದ್ದಾನೆ. ಅವನು ಕಾರಣ ಹೇಳುತ್ತಾನೆ ಅಥವಾ ಕ್ಷಮೆ ಕೋರುತ್ತಾನೆ, ಅಥವಾ ನಡೆಯುವುದನ್ನು ಅನುಭವಿಸುತ್ತಾನೆ. ಇದು ಕಾರ್ಯ ಕಾರಣ.
ಆದರೆ, ರೇಡಿಯೋ ಚಾನೆಲ್ ಗಳಲ್ಲಿ ಎಲ್ಲಕ್ಕೂ ನಿರೂಪಕರನ್ನು ದೂರುತ್ತಾರೆ. ನಿರೂಪಣೆ ಸರಿ ಇಲ್ಲ ಎನ್ನುತ್ತಾರೆ. ಅದರಲ್ಲೂ, ಇಂದಿನ FM ಕೇಂದ್ರಗಳಲ್ಲಿ ಹಾಡಿನ ನಡುವೆ ಮಾತು ಜೋಡಿಸುವ, ಕೂಡಿಸುವ, ಜವಾಬ್ದಾರಿಯನ್ನು ಹೊತ್ತ ನಿರೂಪಕರ ಮಾತನ್ನು ಪ್ರತಿ ಕಡೆಯೂ ಅವಹೇಳನ ಮಾಡಲಾಗುತ್ತಿದೆ. ಆತನ ಜವಾಬ್ದಾರಿ ಏನು? ಆಟ ಏನು ಮಾಡಲು ಆ ಚಾನೆಲ್ ಗೆ ಬಂದಿದ್ದಾನೆ ಎಂಬ ಬಗ್ಗೆ ತಿಳುವಳಿಕೆಗಳು ಎಲ್ಲರಿಗೂ ಇಲ್ಲ. ನಿರೂಪಕರನ್ನೂ ಸೇರಿಸಿ.

ನಿರೂಪಕ ಎಂದರೆ ಒಂದು ವಿಷಯವನ್ನು ಕೊಂಡಿಯಂತೆ ಸಾಗಿಸುವವನು. ಪರಿಚಯ ಮಾಡುವವನು. ಸಂದರ್ಭ ವಿವರಿಸುವವನು. ಘಟನೆ ಹೇಳುವವನು ಎಂಬ ಅರ್ಥಗಳಿವೆ. ವಿಷಯವೇ ಇಲ್ಲದಿದ್ದರೆ ನಿರೂಪಕ ಮಾಡುವುದಾದರೂ ಏನು? ನಿರೂಪಕನಿಗೆ ವಿಷಯ ಯಾರು ಒದಗಿಸಬೇಕು ಎಂದು ಯಾರೂ ಚಿಂತಿಸುತ್ತಿಲ್ಲ. ನಿರೂಪಕ ಏನು ಮಾಡಬಾರದು ಎಂಬ ಬಗ್ಗೆ ಬಹಳ ಜನ ಬಹಳಷ್ಟು ಮಾತುಗಳನ್ನು ಆಡುತ್ತಾರೆ. ಉದಾಹರಣೆಗೆ ನೋಡಿ....
-- ನಿರೂಪಣೆ ಅನುಭವ ಅಲ್ಲ, ಯಾಕೆಂದರೆ ಅವನು field ಗೆ ಹೋಗಿಲ್ಲ. ಅವನು reporter ಅಲ್ಲ.
-- ಅವನು ರಚನೆ ಮಾಡುವಷ್ಟು ಸಾಮರ್ಥ್ಯ ಹೊಂದಿಲ್ಲ, ಅವನು ಸಾಹಿತಿ, ಲೇಖಕ ಅಲ್ಲ.
-- ಅವನು ಹಾಡು ಹೇಳಲಾರ, ಅವನು ಹಾಡುಗಾರನಲ್ಲ
-- ಅವನು ಸುದ್ದಿ ಹೇಳಲಾರ, ಅವನು ಸುದ್ದಿವಾಚಕನಲ್ಲ
-- ಅವನು ವ್ಯಕ್ತಿತ್ವದ ಬಗ್ಗೆ ಮಾತನಾಡಬಾರದು, ಅವನೇನೂ authority ಅಲ್ಲ
-- ಅವನು ಆರೋಗ್ಯ ಸಲಹೆ ಕೊಡಬಾರದು, ಅವನು ವೈದ್ಯನಲ್ಲ
-- ಅವನು ವಿಮರ್ಶೆ ಅಥವಾ comment ಮಾಡಬಾರದು, ಯಾಕೆಂದರೆ ಅದು ಅವನ ಪರಿಧಿ ಅಲ್ಲ.
-- ತನ್ನ ಬಗ್ಗೆ ತಾನು ಮಾತನಾಡಬಾರದು, ಆತ್ಮ ಪ್ರಶಂಸೆ ಸಲ್ಲದು.
ಆಯಿತು. ನಿರೂಪಕ ಇದನ್ನೆಲ್ಲಾ ಮಾಡಬಾರದು. ಹಾಗಾದರೆ ಅವನು ಏನು ಮಾಡಬೇಕು? ನಿರೂಪಕನಿಗೆ 'ವಿಷಯ' ಯಾರು ಕೊಡಬೇಕು? 'ನಿರೂಪಣಾ ಬರಹ' ಇದ್ದರೆ ಯಾರು ಪರಿಷ್ಕರಿಸಬೇಕು? ಜವಾಬ್ದಾರಿ ಯಾರು ಹೊರಬೇಕು?

ಪ್ರತಿ ಚಾನೆಲ್ ನಲ್ಲೂ ನಿರೂಪಕರನ್ನು ನಿಭಾಯಿಸುವ ಅಧಿಕಾರಿಗಳ ತಂದ ಇರುತ್ತದೆ. ನಿರೂಪಕ ತುಂಬಾ ಚೆನ್ನಾಗಿ ಕಾರ್ಯ ನಿರ್ವಹಿಸಿದರೆ ಶಹಬಾಸ್ ಗಿರಿ ಅಧಿಕಾರಿಗೆ. ಆದರೆ ಆಟ ತಪ್ಪಿದರೆ ದಂಡ ನಿರೂಪಕನಿಗೆ. ಇದು ಯಾವ ನ್ಯಾಯ?
ಈಗ SMS ಆಧಾರಿತ ವಿಷಯಾಧಾರಿತ ಕರ್ಯೇಕ್ರಮಗಳನ್ನು ಪ್ರಸ್ತುತಪಡಿಸು ಎಂದು ಸೂಚನೆ ನೀಡಲಾಗುತ್ತದೆ. ಯಾವುದೇ ಆಧಾರದಲ್ಲಿ ಮಾಡಿದರೂ ಒಂದಷ್ಟು 'ಮೂಲಭೂತ' ಮಾತು ಬೇಕೇ ಬೇಕು, ಅದನ್ನು ಹುಡುಕಲು ಪರಾಂಬರಿಸಲು ನಿರೂಪಕ ಕನಿಷ್ಠ ಎರಡು ಘಂಟೆ homework ಮಾಡಬೇಕು ಏಕೆಂದರೆ ಪ್ರತಿ ದಿನ ಕನಿಷ್ಠ ಐದು ಘಂಟೆ ಒಬ್ಬ ನಿರೂಪಕ ಮಾತನಾಡಬೇಕು (ಹಾಡುಗಳ ನಡುವೆ) ಪ್ರತಿ ಘಂಟೆಗೆ ಹತ್ತು ನಿಮಿಷ, ಅಂದರೆ ಐದು ಘಂಟೆಗೆ ಐವತ್ತು ನಿಮಿಷ. ಕಡಿಮೆಯೆಂದರೂ, ಮೂವತ್ತು ನಿಮಿಷ. ಇಷ್ಟು ಮಾಡಲು ಆತ ಪುಸ್ತಕ ಓದಬೇಕು, ಮಾಹಿತಿ ಸಂಗ್ರಹಿಸಬೇಕು, ತನ್ನ ಓಘಕ್ಕೆ ಮಾತು ಬರೆದುಕೊಳ್ಳಬೇಕು, ಹಾಡುಗಳನ್ನು ಹುಡುಕಬೇಕು ಮಾತಾಡಬೇಕು. ಇಷ್ಟಾದರೂ ಅವನು ಮಾಡಿದ್ದು 'ಏನು ಮಹಾ' ಎಂಬ ಧೋರಣೆ....

ವಿಚಾರಶೀಲರು, ಬುದ್ಧಿವಂತರು, ನಿರೂಪಣೆ ಇಂದ ಏನನ್ನೋ ಹುಡುಕುವ ಮಟ್ಟ ಮೀರಿರುತ್ತಾರೆ. ಆದಕಾರಣ, ಅವರಿಗೆ ಅದರಲ್ಲಿ ಆಸಕ್ತಿ ಇರಲಾರದು. ಇನ್ನು, ಮಧ್ಯಮ ವರ್ಗದ, ಕೆಳ-ಮಧ್ಯಮ ವರ್ಗದ, ಸಾಮಾನ್ಯರಲ್ಲಿ ಸಾಮಾನ್ಯರು ಎನಿಸುವ ಜನರು 'ನಿರೂಪಣೆ ಒಂದು ಮಜಾ' ಎಂದು ಭಾವಿಸಿ 'ಸಕ್ಕತ್ hot ಮಗಾ' ಎನ್ನುತ್ತಾರೆ.
ನಿರೂಪಣೆ ನಿಜಕ್ಕೂ 'ಮಜಾ' ಅಲ್ಲ. ಅದೊಂದು ಗಂಭೀರವಾದ, ಆನಂದಿಸಬೇಕಾದ, ಅನುಭವಿಸಬಹುದಾದ, ಕಾಯಕ. ತಾನೂ ಬೆಳೆಯುತ್ತ, ಸಮಾಜವನ್ನೂ ವಿಚಾರದೆಡೆಗೆ ಕರೆದೊಯ್ಯುವ ಭಾಷಾ ಪರಿಚಾರಕತನ.

'ನಿಮ್ಮ ಮನೆ ನಾಯಿ ಏನು ಮಾಡಿತು?' 'ನಿಮ್ಮ first night ಹೇಗಿತ್ತು' 'ನಿಮ್ಮ love ಯಾಕೆ fail ಆಯಿತು' ಇಂತಹ ಪ್ರಶ್ನೆಗಳನ್ನು ಇಟ್ಟುಕೊಂಡು ನಿರೂಪಕರು ಕಾರ್ಯಕ್ರಮ ಹೆಣೆಯಲು ಹೆಣಗಾಡುತ್ತಿದ್ದಾರೆ.
ಒಂದು ವರ್ಗ ಸಂಪೂರ್ಣವಾಗಿ ಈ ಸಂಸ್ಕೃತಿಯನ್ನು ತಿರಸ್ಕರಿಸಿದರೆ ಮತ್ತೊಂದು ವರ್ಗ 'ನಿರೂಪಕರೇ' celebrity ಗಳು ಎನ್ನುವ ಹಾಗೆ ನೋಡುತ್ತಿದೆ. ಎರಡರ ನಡುವೆ ಚಾನೆಲ್ ಗಳು ಹಣ ಮಾಡುತ್ತವೆ. executive ಗಳು ಹೆಸರು ಮಾಡುತ್ತಾರೆ. ಎಲ್ಲೋ, ಅಲ್ಲಿ-ಇಲ್ಲಿ, ಒಬ್ಬಿಬ್ಬರು ನಿರೂಪಕರನ್ನು ಬಿಟ್ಟರೆ ಇದನ್ನು serious ಆಗಿ 'ಕಲೆ' ಎಂದು ಭಾವಿಸಿ ಅದರ ಘನತೆ ಕಾಪಾಡುವಲ್ಲಿ ಬಹುತೇಕ ಜನ ನಿರೂಪಕರು ಸೋಲುತ್ತಿದ್ದಾರೆ.

ಈಗಂತೂ ಎಲ್ಲೆಡೆ star ಗಳು ನಿರೂಪಣೆ ಮಾಡಲು ಬರುತ್ತಿದ್ದರೆ. cricket stars, tennis stars, ತಾವೇ ತಮ್ಮ ಮೆಚ್ಚಿನ ಮಾತು, ಹಾಡು ಹೇಳುತ್ತಾರೆ. ಶಿವರಾಜ್ ಕುಮಾರ್ ನಿಂದ ಹಿಡಿದು ಸಿಹಿ-ಕಹಿ ಚಂದ್ರು ವರೆಗೂ ಎಲ್ಲ ನಟ-ನಟಿಯರೂ, ಗಾಯಕ-ಗಾಯಕಿಯರೂ, ಪತ್ರಕರ್ತರೂ, ಸಂಪಾದಕರೂ, doctor ಗಳು, ಬರಹಗಾರರು, ಎಲ್ಲರೂ 'show' ಮಾಡುವವರೇ. ಇದು ನನ್ನ ಶೋ, ಅದು ನಿನ್ನ ಶೋ, ನನಗೂ ಶೋ ಕೊಡ್ತಿರಾ, ಇದು ಚಾನೆಲ್ ಗಳಿಗೆ ಈಗೀಗ ಬರ್ತಾ ಇರೋ ಪ್ರಶ್ನೆ.

ಸಾಕು ಈ show off ... ನಿರೂಪಕರು ಮೊದಲು ಗಂಭಿರವಾಗಿ ಚಿಂತಿಸಬೇಕು. ನಮ್ಮ ಕೆಲಸ ಏನು? ನಾವೇನು ಮಾಡಬೇಕು? ಎಂದು. ವೃತ್ತಿಯ ಘನತೆ ಉಳಿಸಿಕೊಳ್ಳಬೇಕು.
GN ಮೋಹನ್ ಅವರು ತಮ್ಮ ಒಂದು ಪದ್ಯದಲ್ಲಿ ಹೇಳುತ್ತಾರೆ - "ಈಗ ಕಾಲ ಬದಲಾಗಿದೆ, ನಗಿಸಲು ಎಲ್ಲರೂ ಸಿದ್ಧರಿದ್ದಾರೆ. ಒಂದು ಮಾತು ಹೇಳಿದರೂ ನಗಬೇಕೆಂದ ನಿಯಮ ಇದೆ. ಮನಸು ಹೇಗಾದರೂ ಇರಲಿ ಸದಾ ಮುಗುಳ್ನಗುವ ಸುಂದರಿಯರಿದ್ದಾರೆ. ಮುಗುಳ್ನಗು ಉಕ್ಕಲೆಂದೇ toothpaste ಗಳಿವೆ...... ಕೋಡಂಗಿಗೆ ಇನ್ನು ಕೆಲಸವಿಲ್ಲ." ಹಾಗೆ ಇನ್ನು ಸ್ವಲ್ಪ ದಿನಗಳಲ್ಲಿ celebrity ಗಳೇ show ನಡೆಸುತ್ತಾರೆ. ತಜ್ಞರು-ತಜ್ಞರು ಮಾತನಾಡುತ್ತಾರೆ. ಆಗ ನಿರೂಪಕರ ಅಗತ್ಯ ಇಲ್ಲ. ಅಥವಾ ನಿರೂಪಕ ನಿಜವಾಗಿಯೂ ಕೋಡಂಗಿ ಜಾಗವನ್ನು ಸರಿಯಾಗಿ ತುಂಬುತ್ತಾನೆ...

No comments:

Post a Comment