Monday, May 26, 2025

ನಿಮ್ಮ ಹಾಡು..

"ಓಹ್.. ನಿಮ್ಮನ್ನು ನೋಡಿ ತುಂಬಾ ದಿನ ಆಯ್ತು....! "

ವಾರದಲ್ಲಿ ಒಂದು ದಿನ ಹವ್ಯಾಸದ ಭಾಗವಾಗಿ ಅಕಾಶವಾಣಿಗೆ ಬಂದ ಒಬ್ಬರು ಗೆಳತಿ ಹೇಳಿದರು.

"ನಾನು ನಿತ್ಯವೂ ಇಲ್ಲೇ ಇರುತ್ತೇನಲ್ಲಮ್ಮಾ ..."

ಅಂದೆ. 

"ಹೌದು. ನನಗೆ ಸಿಕ್ಕಿಲ್ಲ." ಅವರ ಉತ್ತರ.

ಮಾತು ಮುಗಿಯಿತು.

   ಆದರೆ, ಸುಮ್ಮನೆ ಇರಲಿಲ್ಲ ನನ್ನ  ಮನಸ್ಸು.

" ನನಗೆ ಸಿಕ್ಕಿಲ್ಲ "  

ಇದು ಮತ್ತೆ ಮತ್ತೆ ರಿಂಗಣಿಸಿತು.

ಯಾರಿಗೆ ಸಿಕ್ಕಿದೆ ನಾನು.. ?

ಯಾರಿಗೂ ಇಲ್ಲ.

ಆಕಾಶವಾಣಿಯ ಉದ್ಘೋಷಕರ ಕೆಲಸ ಬಹಳ ಬಹಳ ವಿಚಿತ್ರವಾದದ್ದು.

ಬೆಳಿಗ್ಗೆ, ಮಧ್ಯಾನ್ಹ , ರಾತ್ರಿ ಮೂರು ಪಾಳಿ.

ಬೆಳಿಗ್ಗೆ ಪಾಳಿಯಲ್ಲಿ , ಬೆಳಗಿನ ಝಾವ 3 30 ಕ್ಕೆ ಎದ್ದು, 4.20 ಕ್ಕೆ ಸಿದ್ಧವಾಗಿ , 5 ಗಂಟೆಗೆ office ತಲುಪಿ, bio metric ಹಾಜರಾತಿ ಹೇಳಬೇಕು.

ಮಧ್ಯಾಹ್ನ ದ ಪಾಳಿ ಆದರೆ 10 ಕ್ಕೆ or 11 ಕ್ಕೆ ಆರಂಭ. 

ಸಂಜೆ ಪಾಳಿ 4 ಕ್ಕೆ ಆರಂಭ, ಮುಗಿಸಿ, ಮನೆ ಸೇರುವುದು ರಾತ್ರಿ 12 ಅಥವಾ 12 30.

12 30 ಕ್ಕೆ ಮನೆ ಸೇರಿದರೂ ಮರುದಿನ, general ಇದ್ದರೆ, ಬೆಳಿಗ್ಗೆ 9 ಕ್ಕೆ ಮನೆ ಬಿಡಬೇಕು.


ಅನೇಕರು ಕೇಳುತ್ತಾರೆ,

" ಹೇಗೆ ನಿಮ್ಮ timings "  ಎಂದು.

"ಅದು ಹಾಗೇ.. ಹೇಗೆ ನಿಗದಿ ಆಗುತ್ತದೋ ಹಾಗೆ " ಎನ್ನುತ್ತೇನೆ.

Duty ಗಳು  ಅಂದರೆ, ಪಾಳಿಗಳು , ಶಾಲಾ ವೇಳಾಪಟ್ಟಿಯಂತೆ, ಪ್ರಕಟ ಆಗಿಬಿಡುತ್ತವೆ.

ವಾರ , 15 ದಿನಗಳ ಪಾಳಿ ಪಟ್ಟಿ ಬಂದುಬಿಟ್ಟರೆ, 

ಆಯಿತು, fix. ಅಷ್ಟೇ.

ಮನೆಯ ಯಾವುದೇ ಕೆಲಸ,  ಖಾಸಗಿ ಜೀವನ, ಮಕ್ಕಳು, ಗಂಡ, ಮದುವೆ, ಹುಟ್ಟಿದ ಹಬ್ಬ , ಇತ್ಯಾದಿ ಇತ್ಯಾದಿ ಎಲ್ಲವೂ ಈ " fix " 

ಒಳಗೆ adjust ಆಗಬೇಕು, ಅಂದರೆ ಮಾತ್ರ ಹಾಜರಾತಿ. ಇಲ್ಲವಾದರೆ ಇಲ್ಲ.

ಉದಾಹರಣೆಗೆ, ಬೆಳಿಗ್ಗೆ ಒಂದು ಮದುವೆ ಮುಹೂರ್ತ. ಬೆಳಗಿನ ಪಾಳಿ ಇದ್ದರೆ ಹೋಗಲು ಆಗದು. Cancel.

ಸಂಜೆ, reception. ನಿಮಗೆ ಸಂಜೆ duty. 

ಹೋಗಲು ಆಗದು.

ಭಾನುವಾರ, ಎಲ್ಲರಿಗೂ ರಜೆ. ಆದರೆ,  ಇಲ್ಲಿ ಭಾನುವಾರ ರಜೆ, ಅಂತ ಏನೂ ಇಲ್ಲ. ವಾರದ ರಜೆ ಬೇರೆ ದಿನ ಇದ್ದರೆ, ಭಾನುವಾರ ಕೆಲಸ ಮಾಡಲೇ ಬೇಕು.

ದೀಪಾವಳಿ ಇರಲಿ, ಈದ್ ಇರಲಿ, christmas ಇರಲಿ, ಸ್ವಾತಂತ್ರ್ಯ ಉತ್ಸವ ಇರಲಿ, ಕರ್ತವ್ಯ ಮಾಡಿ, ನಂತರ ಅದರ compensatory ರಜೆ ಪಡೆಯಬಹುದು.


ಕರ್ತವ್ಯ ದಲ್ಲಿ ಇರುವಾಗ mike ಮುಂದೆ ಮಾತಾಡುವ , ಕೆಲಸ ಆದ್ದರಿಂದ phone silent. ಕರೆ ಸ್ವೀಕಾರ ಮಾಡುವುದಿಲ್ಲ.

ಅತ್ಯಂತ ತಮಾಷೆ, ಅಂದರೆ, ಯಾರೋ ಒಬ್ಬರು, ಸಂಜೆ ಏಳಕ್ಕೆ ಕರೆ ಮಾಡುತ್ತಾರೆ ಎಂದಿಟ್ಟುಕೊಳ್ಳಿ. ಸಂಜೆ ಡ್ಯೂಟಿ. 

ಕರೆ ತೆಗೆಯುವುದಿಲ್ಲ..

ಅವರು ಮರುದಿನ 11 ಕ್ಕೆ ಮಾಡುತ್ತಾರೆ. 

ಆಗ ಮಧ್ಯಾಹ್ನ duty.. ಮತ್ತೆ ಆಗುವುದಿಲ್ಲ.

ಅವರು ಮತ್ತೆ ಬೆಳಿಗ್ಗೆ 8 ಕ್ಕೆ ಮಾಡುತ್ತಾರೆ, ಆಗ ಬೆಳಿಗ್ಗೆ duty.

ಕೋಪಿಸಿಕೊಳ್ಳುತ್ತಾರೆ....

" ಏನ್ರೀ ನೀವು, ಬೆಳಿಗ್ಗೆ 8 ಕ್ಕೆ ಮಾಡಿದರೂ duty, 12 ಕ್ಕೆ ಮಾಡಿದರೂ duty, ರಾತ್ರಿ 8 ಕ್ಕೆ ಮಾಡಿದರೂ duty...

ಅಂತೀರಾ... " 

ಬೇಸರ ಮಾಡಿಕೊಳ್ಳುತ್ತಾರೆ.

"ಒಂದು ವಾರ ಇಡೀ ಒಂದೇ duty ಇರುವುದಿಲ್ಲವೇ " ಅಂತ ಕೇಳುತ್ತಾರೆ.

ಇಲ್ಲ. ಇರುವುದಿಲ್ಲ. 

ಒಂದೊಂದು ದಿನ ಒಂದೊಂದು ಪಾಳಿ. ಪ್ರತಿದಿನ ಬದಲಾಗುತ್ತದೆ.

ಅದಕ್ಕೇ ಹೇಳಿದ್ದು.

ಇದು , ಅತ್ಯಂತ ವಿಚಿತ್ರ ಸಂಗತಿ ಎಂದು.

ಯಾರಿಗೂ ಅರ್ಥವಾಗದ ವಿಚಿತ್ರ.

ಬೆಳಗಿನ ಪಾಳಿ ಮುಗಿಸಿ, 12 ಗಂಟೆಗೆ ಮನೆಗೆ ಹೊರಡಲು ಅನುವಾದಾಗ, ಆಗಷ್ಟೇ ಬಂದಿರುವ ಇತರ ಸಿಬ್ಬಂದಿಗೆ, ಇವರು ಎಷ್ಟು ಬೇಗ ಹೋಗುತ್ತಿದ್ದಾರೆ ಎಂಬ ಭಾವ.

ಬೆಳಿಗ್ಗೆ 3 30ಕ್ಕೆ ಎದ್ದು, 5 ಗಂಟೆಗೆ ಬಂದಿದ್ದು ಅವರಿಗೆ feel ಆಗುವುದು ಕಷ್ಟ.

ಎರಡು ತರಹ ಸಿಬ್ಬಂದಿ ಇರುತ್ತಾರೆ.

ಸಾಂದರ್ಭಿಕ ಕೆಲಸ ಮಾಡುವ , ಅಂದರೆ ವಾರಕ್ಕೆ ಒಂದೇ ದಿನ ಬರುವ ಉದ್ಘೋಷಕರು.

ಅವರದು ಆ ದಿನದ ಕೆಲಸ ಮಾತ್ರ. 

ಆದ್ದರಿಂದ ಯಾವುದೇ ಪಾಳಿ ಆದರೂ ..ok...ಒಂದೇ ದಿನ ..ಮತ್ತು ಇದು ಹೆಸರಿಗೆ ಮತ್ತು ಹವ್ಯಾಸಕ್ಕೆ ತೊಡಗುವ ಕೆಲಸ. 

ಇತರ ಜಂಜಡ ಗಳಿಂದ ಬಿಡಿಸಿಕೊಳ್ಳಲು ವಾರಕ್ಕೆ ಒಮ್ಮೆ ಬರುವವರು. ಸಾಗಿಬಿಡುತ್ತದೆ.


ಹೀಗೇ ಮನಸ್ಸು ಹಿಂದೆ , ಹಿಂದೆ, ಓಡಿತು..

ಯಾರಿಗೆ ಸಿಕ್ಕಿದ್ದೇನೆ ನಾನು..?

ಯಾವುದಕ್ಕೆ ಸಿಕ್ಕಿದ್ದೇನೆ ನಾನು ..?

ಪ್ರತಿದಿನ ನಿಯಮಿತವಾಗಿ ಏನನ್ನಾದರೂ ಮಾಡಬೇಕು ಎಂದರೆ ಖಂಡಿತ ಸಾಧ್ಯ ಆಗುವುದಿಲ್ಲ. ಸಂಜೆ, ಬೆಳಿಗ್ಗೆ, ಮಧ್ಯಾಹ್ನ, ಯಾವುದೂ ಸಿಗುವುದಿಲ್ಲ.

ಹಬ್ಬ ಸಿಕ್ಕರೆ ಸಿಕ್ಕೀತು, ಇಲ್ಲವಾದರೆ, ಇಲ್ಲ.

ಇರಲಿ.

ಇನ್ನೊಂದು ವಿಚಾರ ವಿದೆ.

ಎಲ್ಲರಿಗೂ ತಮ್ಮ ಕೆಲಸದ ಸ್ಥಳದಲ್ಲಿ 15 , 20 ನಿಮಿಷ ತಡವಾಗಿ ಬಂದು ಸೇರಲು ಒಂದು ಪುಟ್ಟ ಅವಕಾಶ ಇದೆ. 

ಉದ್ಘೋಷಕರು ತಡವಾಗಿ ಬರುವ ಹಾಗೇ ಇಲ್ಲ. ಹಾಗೇನಾದರೂ ಆದರೆ, ಇಡೀ ಕರ್ನಾಟಕ ಕ್ಕೆ ಗೊತ್ತಾಗುತ್ತದೆ. 

ಒಮ್ಮೆ ಕುರ್ಚಿಯಲ್ಲಿ ಕುಳಿತರೆ, ಪ್ರಸಾರ ಸುಸೂತ್ರ ನಡೆಸಿಕೊಂಡು , ಹೋಗುವ ಜವಾಬ್ದಾರಿ, ಸಣ್ಣದಲ್ಲ.

ಸ್ಟುಡಿಯೋ ದಿಂದ ಹೊರಗೆ ಬರಲು ಆಗದು.

ಅಕಸ್ಮಾತ್ ಬರಬೇಕಾದರೆ , ನಿಮಿಷದ ಲೆಕ್ಕ ಇಟ್ಟುಕೊಂಡು ಹೊರಬರಬೇಕು.

ಒಂದು ಹಾಡು 5 ನಿಮಿಷ, ಒಂದು ಜಾಹೀರಾತು 3 ನಿಮಿಷ. ಒಟ್ಟು 8 ನಿಮಿಷ, ಹೊರಗೆ ಹೋಗಿ, ಏನೋ ವಸ್ತು ತೆಗೆದುಕೊಂಡು ಮತ್ತೆ ವಾಪಸಾಗಲು ಎಷ್ಟು ನಿಮಿಷ, 

ಕಾಫಿ ಕುಡಿಯಬೇಕು ಅಂದರೆ, ಎಷ್ಟು ವೇಗವಾಗಿ ಕುಡಿಯಬೇಕು, 

ಹೀಗೆ ....ಸಮಯದ ಲೆಕ್ಕ.

ಮತ್ತೊಂದು ಪ್ರಶ್ನೆ ಇದೆ, 

"ನೀವು 32 ವರ್ಷ ಸೇವೆ ಮಾಡಿದಿರಿ, ನೀವು director ಆಗಲಿಲ್ಲವಾ...

............ ಇವರು , ನೀವು ಒಟ್ಟಿಗೇ ಸೇರಿದಿರಿ ಅಲ್ಲವಾ, ಅವರು ಈಗ ....ಇದಲ್ಲವಾ...? "

ಉತ್ತರ : ಇಲ್ಲ ಸ್ವಾಮೀ...

ಉದ್ಘೋಷಕರು ಕಲಾವಿದರು.

ಅವರು ತಮ್ಮ ಕಲೆಯಲ್ಲಿಯೇ ತೃಪ್ತಿ ಕಾಣಬೇಕು. ಅವರಿಗೆ ಅಧಿಕಾರ ಪ್ರಾಪ್ತಿ ಇಲ್ಲ ಎಂಬುದು ವ್ಯವಸ್ಥೆ ಯ ಮಾತು.

ಎಲ್ಲ ರೀತಿಯ ಆರ್ಥಿಕ ಭದ್ರತೆ, ಮತ್ತು ಸೌಲಭ್ಯ ಪಡೆದರೂ, ಬಡ್ತಿ ಎಂಬುದು ಇವರಿಗೆ ಇಲ್ಲ.

ನೇರಪ್ರಸಾರದಲ್ಲಿ, ಬೆಳಿಗ್ಗೆ 5 50ಕ್ಕೆ , ಶುಭೋದಯ, ಹೇಳುತ್ತಾ ರಾತ್ರಿ 11 30ಕ್ಕೆ ಶುಭರಾತ್ರಿ ಹೇಳುತ್ತಾ 

 ಹಗಲೂ ನಿನ್ನದೇ

ಇರುಳೂ ನಿನ್ನದೇ ಅಂತ ಸಮಯಕ್ಕೇ ಹಾಡು ಹೇಳುವವರು  ಉದ್ಘೋಷಕರು.

ಯಾವಾಗಲೋ ತಿಂಡಿ, ಯಾವಾಗಲೋ ಊಟ!!

 ನಿದ್ದೆ  ಅಂದರೆ ಏನು ಎಂದು ತಿಳಿಯಲು ಕಷ್ಟ ಪಡುವವರು.

ವಾರದಲ್ಲಿ ಒಂದು ದಿನ ಕೆಲಸ ಮಾಡುವವರ ಜೊತೆಯಲ್ಲಿ, 6 ದಿನವೂ ಕೆಲಸ ಮಾಡುತ್ತಾ, ಇದ್ದರೂ ನೀವು ಸಿಗಲಿಲ್ಲ, ಅನಿಸಿಕೊಳ್ಳುವವರು. ಎಲ್ಲರಿಗೂ ಸಮಯ ಹೇಳುತ್ತಾ, ಸಮಯವೇ ನಾವಾದವರು.

ನಾವು ಗಡಿಯಾರದ ಮಕ್ಕಳು.

ಎಲ್ಲ ಅರ್ಥದಲ್ಲೂ...

ಉದ್ಘೋಷಕರು ಗಡಿಯಾರದ ಮಕ್ಕಳು.

ಸ್ಟುಡಿಯೋ ಹೊಸ್ತಿಲು ದಾಟದ ಆಕಾಶವಾಣಿಯ ಕಾವಲುಗಾರರು.

ಭಾಷೆಯನ್ನು  ಬಿತ್ತುವ  ಸಾಗುವಳಿದಾರರು.

ವಾಸ್ತವ ಮರೆಸುವ ವಾಚಾಳಿಗಳು.

ಮಾತು ಮೌನಗಳ ಆಚೆ ಬದುಕಿನ ಪ್ರೀತಿ ಸಂಪಾದಿಸುವ ಕಲಾವಿದರು.

ಯಾರಿಗೂ ಸಿಗದವರು.

ಸಿಗದವರು. ಆದರೆ ಎಲ್ಲರಲ್ಲೂ ಇರುವವರು.

ನಿಮ್ಮ ಕೈ ಗಡಿಯಾರದ ಅಂಚಿನಲ್ಲಿ,

Mobile ನ ರಿಂಗಣದಲ್ಲಿ, bus ನಲ್ಲಿ, train ನಲ್ಲಿ, car ನಲ್ಲಿ, ಕೆಲಸದಲ್ಲಿ, ದುಡಿಮೆಯಲ್ಲಿ, 

ಸುಖದಲ್ಲಿ, ದುಃಖದಲ್ಲಿ, ಹಬ್ಬದಲ್ಲಿ, ಹರಟೆಯಲ್ಲಿ, ಯುದ್ಧದಲ್ಲಿ, ಶಾಂತಿಯಲ್ಲಿ,  ನೀವು ಹುಡುಕುವ ಹಾಡು ನಾವು..

ನಿಮ್ಮದೇ ಧ್ವನಿ ನಾವು..

ಬನ್ನಿ ಈಗ ನಿಮಗಾಗಿ ಒಂದು ಗೀತೆ.....

.........................................





No comments:

Post a Comment