ನಿರೂಪಣೆ, ಮಾತಲ್ಲ, ಗೀತೆ..
ನಿರೂಪಣೆ ಬಗ್ಗೆ ನಾನು ಬರೆದ ಒಂದು ಕೈಪಿಡಿ ರೂಪದ ಪುಸ್ತಕ.
ನಿರೂಪಣೆ, ಹೇಗಿದ್ದರೆ ಚೆನ್ನ,
ನಿರೂಪಕರ ಜವಾಬ್ದಾರಿ ಗಳು, ಭಾಷೆಯ ಬಳಕೆ, ಸಭೆ ಕಾರ್ಯಕ್ರಮ ಮತ್ತು ಧ್ವನಿಮುದ್ರಿತ ಕಾರ್ಯಕ್ರಮಗಳು, ಸಾಕ್ಷ್ಯಚಿತ್ರಗಳು, ಜಾಹೀರಾತು, ಪ್ರತಿ ಒಂದೂ ಹೇಗೆ ಭಿನ್ನ ಮತ್ತು ಯಾಕಾಗಿ ಭಿನ್ನ
ಎಂಥೆಂಥ ಸಂದರ್ಭಗಳಲ್ಲಿ ಏನು ಮಾಡಬಹುದು..
ಹೀಗೆಲ್ಲ ಹೇಳಿದ್ದೆ ಅದರಲ್ಲಿ.
2009ರಲ್ಲೇ ಪ್ರಕಟವಾಯಿತು.
ಇವತ್ತಿಗೂ ನಿರೂಪಣೆ ,ಮಾತಲ್ಲ ಗೀತೆ ಶೀರ್ಷಿಕೆ ಸುಂದರ ಎಂದೇ ಹೇಳುತ್ತಾ ಅನೇಕರು ಚರ್ಚೆ ಮಾಡಲು ಆರಂಭಿಸುತ್ತಾರೆ.
2001 ರ ನಂತರ , ಬೆಂಗಳೂರು ಮತ್ತು ಅಲ್ಲಲ್ಲಿ ಖಾಸಗಿ fm ಕೇಂದ್ರಗಳು ಒಂದೊಂದಾಗಿ ಆರಂಭ ಆದವು.
ಭಾಷೆ , ಶೈಲಿ , ಕಾರ್ಯಕ್ರಮ ಸ್ವರೂಪ ಎಲ್ಲವೂ ಬದಲಾವಣೆ ಯತ್ತ ಸಾಗುತ್ತಿದ್ದ ಸಮಯ.
ಏನೋ ಹೊಸದು ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದ ಸಮಯ.
ಆ ಸಂದರ್ಭದಲ್ಲಿ ನಿರೂಪಣೆಯ ಸೂಕ್ಷ್ಮ ವಿಚಾರಗಳನ್ನು ಪ್ರಸ್ತಾಪಿಸಿ ಬರೆದದ್ದು "ನಿರೂಪಣೆ, ಮಾತಲ್ಲ, ಗೀತೆ" ಪುಸ್ತಕ.
ಆಕಾಶವಾಣಿಯ rainbow ವಾಹಿನಿ ಶುರು ಆದ ಸಮಯದಿಂದ ಈ ಕ್ಷಣದವರೆಗೂ ನೂರಾರು ನಿರೂಪಕರಿಗೆ ತರಬೇತಿ ನೀಡಿದ್ದೇನೆ.
ತುಂಬಾ ಮಂದಿ ಬೇರೆ ಬೇರೆ ಕಡೆ ಹೋಗಿದ್ದಾರೆ. ವಾಹಿನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಇವತ್ತಿಗೂ ಕೆಲವರು ನೀವು ಹೇಳಿದ ಈ ಮಾತು ಮರೆತಿಲ್ಲ ಅಂತ ಹಲವು ಸಂಗತಿಗಳನ್ನು ನೆನೆಸಿಕೊಳ್ಳುತ್ತಾರೆ.
ಒಬ್ಬಳು ಹುಡುಗಿ, ಒಂದು ದಿನ ನನ್ನ ಹುಡುಕಿಕೊಂಡು ಬಂದು," ನಿಮ್ಮ ಪುಸ್ತಕದ ಶೀರ್ಷಿಕೆಯನ್ನು ನಾನು ನನ್ನ visiting card ಗೆ ಬಳಸಿಕೊಂಡಿದ್ದೇನೆ" ಎಂದಳು.
ಮಾಧ್ಯಮ ಕಾಲೇಜುಗಳಲ್ಲಿ ರೇಡಿಯೋ ಅಥವಾ ನಿರೂಪಣೆ ಪಾಠ ಮಾಡಿದ ಸಂದರ್ಭದಲ್ಲಿ ಹೇಳಿದ ಮಾತುಗಳನ್ನು, ಬೇರೆ ಬೇರೆ ವಾಹಿನಿಗಳಲ್ಲಿ ಕೆಲಸ ಮಾಡುವ ನನ್ನ ಪ್ರೀತಿಯ ವಿದ್ಯಾರ್ಥಿಗಳು ನೆನೆಸಿಕೊಳ್ಳುತ್ತಾರೆ. ಸಂದೇಶ ಕಳಿಸಿ ಮಾತಾಡುತ್ತಾರೆ.
ಆ ಪುಸ್ತಕದ ಪ್ರತಿಗಳು ಮುಗಿದು ಹೋಗಿವೆ.
ಮರುಮುದ್ರಣ ಮಾಡೋಣ ಎನ್ನುತ್ತಿದ್ದಾರೆ ಪ್ರಕಾಶಕರು.
ಅದಕ್ಕೆ ಇನ್ನಷ್ಟು ವಿಚಾರ ಸೇರಿಸಬೇಕು, ಹಾಗಾಗಿ ಸ್ವಲ್ಪ ಸಮಯ ಬೇಕು ಎನ್ನುತ್ತೇನೆ ನಾನು.
ಆ ಸೇರಿಸಬೇಕಾದ ಸಂಗತಿ ಏನು..?
ಕುಳಿತು ಕೊಂಡಾಗ ನೂರಾರು ಆಲೋಚನೆಗಳು.
ನಿರೂಪಣೆ ಇಂದು ಗೀತೆಯಾಗಿ ಭಾವಿಸಲ್ಪಡುತ್ತದೆಯೇ?
ನಿಜಕ್ಕೂ ನಿರೂಪಣೆ ಒಂದು ಸೂಕ್ಷ್ಮ ಕಲೆಗಾರಿಕೆ ಎಂದು ಹೇಳಲು ಸಾಧ್ಯವೇ..?
ನಿರೂಪಣೆ ಅಂದರೆ ಮಾತು ಎಂದು ಮಾತ್ರ ತಿಳಿದಿರುವವರಿಗೆ,
ಅದು ಕೇವಲ ಮಾತಲ್ಲ ಎಂದು ಹೇಳಲು ಆದೀತೇ..?
ಒಬ್ಬರು ನೂರು ಪುಸ್ತಕ ಬರೆದಿರಬಹುದು, ಅದ್ಭುತ ಭಾಷಣಕಾರ ಆಗಿರಬಹುದು, ಸ್ಫುಟವಾಗಿ ಸುಲಲಿತವಾಗಿ ಮಾತಾಡಬಹುದು, ಆದರೆ
" ನಿರೂಪಣೆ " ಇದ್ಯಾವುದೂ ಅಲ್ಲ.
ಅದೊಂದು ಚೌಕಟ್ಟಿನ ಮಾತು.
ರಂಜನೆ ಅಲ್ಲ. ಸಮಯ ತುಂಬುವುದಲ್ಲ. ಸುಮ್ಮನೆ ವೇದಿಕೆ ಮೇಲೆ ಇರುವವರನ್ನು ಹೊಗಳುವುದು ಅಲ್ಲ. ಅನಿಸಿದ್ದೆಲ್ಲ ಮಾತಾಡುವುದಲ್ಲ. ಹಾಗೆಂದು
ಸುಮ್ಮನೆ ಈಗ ಇಂಥವರ ಮಾತು ಎಂದಷ್ಟೇ ಹೇಳುವುದೂ ಅಲ್ಲ.
ತಯಾರಿ ಮಾಡಿಕೊಂಡಿದ್ದನ್ನು ಹಾಗೇ ಓದಿಬಿಡುವುದೂ ಅಲ್ಲ. ಅದು ವೀಕ್ಷಕ ವಿವರಣೆ ಅಲ್ಲ.
ಹಾಗಾದರೆ ನಿರೂಪಣೆ ಎಂದರೆ ಏನು ?
ಒಬ್ಬೊಬ್ಬರೂ ಒಂದೊಂದು ಹೇಳುತ್ತಾರೆ. ನನ್ನ ಶೈಲಿ ಪರಮ ಸತ್ಯ ಎನ್ನುತ್ತಾರೆ. ಯಾರಿಗೂ ಆಲೋಚನೆ ಮಾಡುವಷ್ಟು ವ್ಯವಧಾನ ಇಲ್ಲ.
ಸದ್ಯ ಕನ್ನಡ ಬರುತ್ತೆ, ಹೇಳಿದ್ದು ಮಾತಾಡಿದರೆ ಸಾಕು ಅನ್ನುವ ಭಾವ ಆಯೋಜಕರದು.
ಕೆಲವು ಸಲ screen, or stage presence ಚೆನ್ನಾಗಿದ್ದರೆ ಭಾಷೆ ಮತ್ತು ಇತರ ಅಂಶಗಳು ಮರೆ ಆಗುತ್ತವೆ.
ನಾನು ಸಾಮಾನ್ಯವಾಗಿ ಇತರ ನಿರೂಪಕರ ಬಗ್ಗೆ ಮಾತಾಡುವುದಿಲ್ಲ.
ಸೂಕ್ತವೂ ಅಲ್ಲ.
ಅವರವರ ನಂಬಿಕೆ, ಅವರವರ ವಿಚಾರ ಮತ್ತು ಅವರವರ ಬದುಕು.
ಆದರೆ,
" ನಿರೂಪಣೆ ಮತ್ತು ವೇದಿಕೆ " ಬಗ್ಗೆ ಸ್ವಲ್ಪ ಹೇಳಬೇಕು ಅನಿಸಿತು.
ಅನೇಕರು tips ಹೇಳಿ, ಪುಸ್ತಕ ಮರುಮುದ್ರಣ ಬೇಗ ಮಾಡಿ ಎಂದು ಹೇಳುತ್ತಿರುತ್ತಾರೆ. ಅಂತಹ ಆಸಕ್ತರಿಗೆ ಉಪಯೋಗ ಆಗಬಹುದು ಎಂದು ಅಂದುಕೊಳ್ಳುತ್ತಾ, ಹಾಗೇ ಸುಮ್ಮನೆ ಈ ಮಾತುಗಳು.
ಇತ್ತೀಚೆಗೆ ಒಂದು ವೇದಿಕೆಯಲ್ಲಿ ನಾನು ನಿರ್ವಹಣೆ ಮಾಡುತ್ತಿದ್ದೆ.
ಕಾರ್ಯಕ್ರಮದ ಕೊನೆಯ ವೇಳೆಗೆ ಒಬ್ಬರು (ಆಯೋಜಕರ ಹತ್ತಿರದವರು ಇರಬಹುದು, ) ವೇದಿಕೆ ಬಳಿ ಇದ್ದ cordless mike ತೆಗೆದುಕೊಂಡು ವೇದಿಕೆಗೆ ಹೋದರು. ನಾನು ಏನು ಮಾಡುತ್ತಿದ್ದೀರಿ ಎಂದು ಮೆಲ್ಲಗೆ ಕೇಳಿದೆ,
"ಸಮಯ ಆಗಿ ಹೋಗುತ್ತಿದೆ,
ಅವರಿಗೆ ಬೇಗ ಮುಗಿಸಲು ಹೇಳಬೇಕು, ನೀವು ತುಂಬಾ soft, ಅದಕ್ಕೇ ನಾನು ವೇದಿಕೆಗೆ ಬಂದೆ." ಎಂದು ಹೇಳಿದರು.
ಇನ್ನೂ 10 ನಿಮಿಷ ಬಾಕಿ ಇತ್ತು.
ಇನ್ನೂ ಸಮಯ ಇದೆ ಎನ್ನುವ ನೋಟ ಕೊಟ್ಟೆ. ನನ್ನ ಮತ್ತು ಅವರ ಮೌನ ಸಂವಹನ ನೋಡಿ,
ವೇದಿಕೆಯಲ್ಲಿ ಇದ್ದವರು ಚಡಪಡಿಸಿದರು. ನಾನೂ ಪದಗಳನ್ನು ನುಂಗಿಕೊಂಡೇ.
ಏನಾಯಿತು ಎಂದು ಗೊತ್ತಾಗುವ ಮುನ್ನವೇ ವೇದಿಕೆಯಲ್ಲಿ ಮಾತಾಡುತ್ತಿದ್ದವರು ನಮಸ್ಕಾರ. ಎಂದು ಹೇಳಿ ಸುಮ್ಮನಾಗಿಬಿಟ್ಟರು.
ಕೋಲು ಹಿಡಿದು ಓಡಿಸುವ ರೀತಿ ವೇದಿಕೆ ಹತ್ತಿದ ಮತ್ತೊಬ್ಬರು ಧಡ್ ಎಂದು ಇಳಿದು ಹೋಗಿಬಿಟ್ಟರು.
ಪುಟ್ಟ ಅಭಾಸ ಅನಿಸಿದರೂ ನಮಗೆ ಅಷ್ಟೇ ತಿಳಿಯುವ ಹಾಗೆ ನಿಭಾಯಿಸಿದ್ದು ಆಯಿತು.
ಎಲ್ಲವೂ ಸಾಂಗವಾಗಿಯೇ ಪರಿಸಮಾಪ್ತಿ ಆಯಿತು. ಹಾಗೆ ಧಡ್ಡನೆ ವೇದಿಕೆಗೆ ಬಂದವರಿಗೂ ಬೇಗ ಮುಗಿಸೋಣ ಅನ್ನುವುದು ಬಿಟ್ಟರೆ ಬೇರೆ ಯಾವುದೇ ವಿಚಾರ ಇರಲಿಲ್ಲ ಎನ್ನುವುದೂ ಸ್ಪಷ್ಟ.
ಆದರೂ ಈ ಹಿನ್ನೆಲೆಯಲ್ಲಿ ಒಂದೆರಡು ಮಾತುಗಳು ನನ್ನ ಗ್ರಹಿಕೆಯಲ್ಲಿ, ಇರುವುದನ್ನು ಹಂಚಿಕೊಳ್ಳುತ್ತಿದ್ದೇನೆ. ನಿರೂಪಣೆ ಮಾಡುವವರು, ಆಯೋಜಕರು ಗಮನಿಸಬೇಕಾದದ್ದು.
1) ಒಮ್ಮೆ ನಿರೂಪಕರು ಆರಂಭ ಮಾಡಿದ ಮೇಲೆ ಅಂತ್ಯವನ್ನೂ ಅವರೇ ಮಾಡಬೇಕು.
2) ವೇದಿಕೆಯಲ್ಲಿ ಏನೇ ಬದಲಾವಣೆ ಆದರೂ ನಿರೂಪಕರು ಅದನ್ನು ಹೇಳಬೇಕು ಎಂದು ಆಯೋಜಕರು ಹೇಳಬೇಕು.
3) ಸಮಯ ತುಂಬಾ ಸರಿಯಾಗಿ ಪಾಲಿಸಬೇಕು ಅಂದರೆ ಮೊದಲ ಭಾಷಣಕಾರ ಮಾತಾಡುವ ಸಮಯದಿಂದಲೇ ಚಾಕಚಕ್ಯತೆ ಯಿಂದ ನಿಭಾಯಿಸಬೇಕು. ಮೊದಲ ಭಾಷಣಕಾರ 25 ನಿಮಿಷ ಮಾತಾಡಿದ ಮೇಲೆ , 2ನೇ ಭಾಷಣಕಾರ 15 ನಿಮಿಷ ಮಾತಾಡಿದ ಮೇಲೆ ಕೊನೆಯ ಭಾಷಣಕಾರನಿಗೆ 8 ನಿಮಿಷಕ್ಕೆ ಚೀಟಿ ಕೊಡುವುದು ಸೂಕ್ತ ಅಲ್ಲ. ಅದು ಅವಮರ್ಯಾದೆ.
4) ಆಯೋಜಕರು ನಿರೂಪಕರಿಗೆ ಮೊದಲೇ ಸಮಯ ಮಿತಿ ಸೂಚಿಸಿರಬೇಕು. ಅದನ್ನು ಆರಂಭದಲ್ಲಿ ಒಮ್ಮೆ ಹೇಳಿ ಕಾರ್ಯಕ್ರಮ ಶುರು ಮಾಡಬೇಕು , ಸಮಯದ ಮಿತಿ ಮೀರಿದ ಮೇಲೆ ಒಂದು ಸೂಚನೆ ಕೊಡುವುದು ಸೂಕ್ತ.
5) ಬಹಳ ದೊಡ್ಡ ಸಾಧಕರು, ತಿಳಿದವರು, ಜ್ಞಾನಿಗಳು ಇರುವ ವೇದಿಕೆ ನಿರ್ವಹಣೆ ಮಾಡುವಾಗ ಎಚ್ಚರ ಮತ್ತು ಪ್ರಜ್ಞೆ ಇರಬೇಕು.
6) ಯಾವ ವೇದಿಕೆಯನ್ನೂ ಹಗುರ ಮಾಡುವುದು , ಹಗುರವಾಗಿ ನೋಡುವುದು ತರವಲ್ಲ.
7) ಆಯೋಜಕರ ಒಬ್ಬರು ಪ್ರತಿನಿಧಿ ನಿರೂಪಕರಿಗೆ ಸೂಕ್ತ ಸೂಚನೆ ಕೊಡಬೇಕು. ಮತ್ತು ಜವಾಬ್ದಾರಿ ಹೊತ್ತುಕೊಳ್ಳಬೇಕು.
ಮೊನ್ನೆ ವೇದಿಕೆಯ ಮುಂಭಾಗದಲ್ಲಿ ಬಹಳ ಮಂದಿ ದೊಡ್ಡವರು ಕುಳಿತಿದ್ದರು. ಅವರಲ್ಲಿ ನಮಗೆ ಯಾರೋ ಒಬ್ಬರು ಗೊತ್ತಿದ್ದಾರೆ ಎಂದು ಭಾವಿಸಿ ಅವರ ಹೆಸರು ಹೇಳಿ ಸ್ವಾಗತ ಎಂದರೆ ಬೇರೆಯವರಿಗೆ ಅವಮಾನ ಮಾಡಿದಂತೆಯೇ.
ಹೀಗೇ....
ತುಂಬಾ ತುಂಬಾ ಸೂಕ್ಷ್ಮ ಸಂಗತಿಗಳು ಇರುತ್ತವೆ. ಗಮನಿಸುತ್ತಾ , ಇದ್ದಲ್ಲಿ ಅರ್ಥವಾಗುತ್ತದೆ.
"ನಿರೂಪಣೆ, ಮಾತಲ್ಲ ಗೀತೆ." ಹೌದು.
ಇದು ವೃತ್ತಿ ಅಲ್ಲ, ಕಲೆ. ಅನುಭವಿಸಿದರೆ ತಿಳಿಯುತ್ತದೆ.
"ಇದು ಹಾಗೇ ಸುಮ್ಮನೆ business"
ಅಲ್ಲ. ಹೆಸರು, ಪ್ರಸಿದ್ಧಿಗೆ ಅಲ್ಲ. . ಕಲೆಯನ್ನು, ಕನ್ನಡವನ್ನು, ಸಾಂಸ್ಕೃತಿಕ ಘನತೆಯನ್ನು ಬೆಳೆಸಬೇಕಾದ ಜವಾಬ್ದಾರಿ ನಿರೂಪಕರಿಗೆ ಇರಲಿ. ನಿರೂಪಣೆ ಮತ್ತು ಭಾಷೆ , ಕಾರ್ಯಕ್ರಮ ಗಳ ಮೇಲಿನ ಪ್ರೀತಿಯಿಂದ, ಇದನ್ನು ಹೇಳಿದ್ದು ಅಷ್ಟೇ. ಯಾರೂ ತಪ್ಪಾಗಿ ಅರ್ಥೈಸುವುದು ಬೇಡ ಎಂದು ಪ್ರಾರ್ಥನೆ.
ಎಲ್ಲರಿಗೂ ಶುಭವಾಗಲಿ.
#ನಿರೂಪಣೆ #bksumathi
No comments:
Post a Comment